ಜಾಕಾಯಿ
ಮಿರಿಸ್ಟಿಕೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಸಿದ್ಧ ವೃಕ್ಷ. ಜಾಯಿಕಾಯಿ, ಜಾಜಿಕಾಯಿ ಪರ್ಯಾಯನಾಮಗಳು. ಮಿರಿಸ್ಟಿಕ ಫ್ರಾಗ್ರೆನ್ಸ್ ಇದರ ಶಾಸ್ತ್ರೀಯ ಹೆಸರು. ಬೀಜದ ಸುತ್ತು ಇರುವ ಇದರ ಗುಳಕ್ಕೆ ಜಾಪತ್ರೆ ಎಂದು ಹೆಸರು. ಜಾಕಾಯಿ ಪೂರ್ವ ಮಲಕಸ್ ದ್ವೀಪಸ್ತೋಮಗಳ ಮೂಲವಾಸಿ. ಇದು ಬೇಸಾಯದಲ್ಲಲ್ಲದೆ ಕಾಡುಮರವಾಗಿ ಹೆಚ್ಚಾಗಿ ಕಾಣದೊರೆಯದು. ನ್ಯೂಗಿನಿಯಲ್ಲಿ ಇದರ ಹತ್ತಿರ ಸಂಬಂಧಿಗಳುಂಟು. ಭೂಮಿಯ ಪಶ್ಚಿಮಾರ್ಧ ಹಾಗೂ ಪೂರ್ವಾರ್ಧ ಗೋಳಗಳೆರಡರ ಉಷ್ಣಪ್ರದೇಶಗಳಲ್ಲಿ ಇದರ ಬೇಸಾಯ ಇದೆ. ಭಾರತದಲ್ಲಿ ಜಾಕಾಯಿ ಮರದ ಬೇಸಾಯ 18ನೆಯ ಶತಮಾನದ ಕೊನೆಯಲ್ಲಿ ಆರಂಭವಾಯಿತೆಂದು ಹೇಳಲಾಗಿದೆ. ತಮಿಳುನಾಡಿನ ನೀಲಗಿರಿ, ಕೊಯಮತ್ತೂರು, ಸೇಲಮ್, ರಾಮನಾಥಪುರಮ್, ಕನ್ಯಾಕುಮಾರಿ, ಮಧುರೈ ಜಿಲ್ಲೆಗಳಲ್ಲೂ ಕೇರಳ, ಅಸ್ಸಾಮುಗಳಲ್ಲೂ ಇದನ್ನು ಬೆಳೆಸಲಾಗುತ್ತಿದೆ. ಆಂಧ್ರ ಪ್ರದೇಶದ ಅರಕು ಕಣಿವೆ ಪ್ರದೇಶದಲ್ಲೂ ಕೇರಳದ ವೈನಾಡಿನಲ್ಲೂ ಇದನ್ನು ಬೆಳೆಸುವ ಯತ್ನಗಳು ನಡೆಯುತ್ತಿವೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೆಲವು ಅಡಿಕೆ ತೋಟಗಳಲ್ಲಿ ಜಾಕಾಯಿಯನ್ನು ಮಧ್ಯಂತರ ಬೆಳೆಯಾಗಿ ಬೆಳೆಸಲಾಗುತ್ತಿದೆ. ಆದರೂ ಭಾರತದಲ್ಲಿ ಜಾಕಾಯಿ ಬೇಸಾಯ ಕ್ಷೇತ್ರ 300 ಎಕರೆಗಳಿಗೆ ಮೀರಿಲ್ಲ.																		(ಎ.ಕೆ.ಎಸ್.;ಎಂ.ಎಚ್.ಎಂ.)

ಚಿತ್ರ.
ಎಡಗಡೆಯದು-ಒಣಗಿದ ಕಾಯಿ, ಬಲಗಡೆಯದು-ಬೀಜ
ಜಾಕಾಯಿ ಮತ್ತು ಜಾಪತ್ರೆಗಳ ಉಪಯೋಗ ಪ್ರಾಚೀನ ರೋಮನರಿಗಾಗಲಿ, ಗ್ರೀಕರಿಗಾಗಲಿ ತಿಳಿದಿರಲಿಲ್ಲ. ಕ್ರಿ.ಶ. 540ರ ಸುಮಾರಿನಲ್ಲಿ ಕಾನ್‍ಸ್ಟ್ಯಾಂಟಿನೋಪಲಿನಲ್ಲಿ ಇದರ ಬಗ್ಗೆ ಪ್ರಥಮ ಉಲ್ಲೇಖ ಕಂಡುಬರುತ್ತದೆ. ಬಹುಶಃ ಇದಕ್ಕೂ ಮುಂಚೆ ಭಾರತದಲ್ಲಿ ಇದರ ಬಳಕೆ ಇದ್ದಿರಬೇಕು. 12ನೆಯ ಶತಕದ ವೇಳೆಗೆ ಯೂರೋಪಿನಲ್ಲಿ ಇದರ ಬಳಕೆ ಆರಂಭವಾಯಿತು. ಬಹುಕಾಲ ಅರಬ್ ವ್ಯಾಪಾರಿಗಳು ಕಾಯಿ ಮತ್ತು ಪತ್ರೆಗಳ ಮೂಲವನ್ನು ಗುಟ್ಟಾಗಿ ಇಟ್ಟಿದ್ದರು. 1512ರಲ್ಲಿ ಪೋರ್ಚುಗೀಸ್ ನಾವಿಕರು ಅಂಬಾಯ್ನ ಮತ್ತು ಬಾಂಡ ದ್ವೀಪಗಳಲ್ಲಿ ಜಾಕಾಯಿ ಮರದ ಇರವನ್ನು ಪತ್ತೆಹಚ್ಚಿ 17ನೆಯ ಶತಮಾನದ ಮಧ್ಯದವರೆಗೆ ಇದರ ವ್ಯಾಪಾರವನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದರು. ಅನಂತರ ಡಚ್ಚರು ಜಾಕಾಯಿ ವ್ಯಾಪಾರದ ಏಕಸ್ವಾಮ್ಯ ಪಡೆದು, ಮೇಲೆ ಹೇಳಿದ ದ್ವೀಪಗಳನ್ನು ಬಿಟ್ಟು ಉಳಿದ ಯಾವ ಕಡೆಯಲ್ಲೂ ಜಾಕಾಯಿ ಮರ ಬೆಳೆಯದಂತೆ ನಿರ್ಬಂಧಿಸಿದರು. ಆದರೂ 1772ರ ವೇಳೆಗೆ ಫ್ರೆಂಚರು ಜಾಕಾಯಿ ಮರವನ್ನು ಮಾರಿಷಸ್ ಮತ್ತು ಫ್ರೆಂಚ್ ಗಯಾನಗಳಲ್ಲಿ ಬೆಳೆಸುವುದರಲ್ಲಿ ಯಶಸ್ವಿಗಳಾದರು. 18ನೆಯ ಶತಮಾನದ ಕೊನೆಯಲ್ಲಿ ಮಲಕಸ್ ದ್ವೀಪಗಳಿಗೆ ಪ್ರಯಾಣ ಮಾಡಿದ ಈಸ್ಟ್ ಇಂಡಿಯ ಕಂಪನಿಯ ಸಸ್ಯಶಾಸ್ತ್ರಜ್ಞ ಕ್ರಿಸ್ಟೋಫರ್ ಸ್ಮಿತ್ ಎಂಬಾತ ಪೆನಾಂಗ್, ಕ್ಯೂ ಸಸ್ಯೋದ್ಯಾನ ಕಲ್ಕತ್ತ, ಮದರಾಸು ಮುಂತಾದೆಡೆಗಳಿಗೆ ಜಾಕಾಯಿ ಮರದ ಸಸಿಗಳನ್ನು ಕಳಿಸಿದ. ಅನಂತರ ಪೆನಾಂಗ್ ಮತ್ತು ಸಿಂಗಪುರಗಳಲ್ಲಿ ಜಾಕಾಯಿ ತೋಟಗಳು ವೃದ್ಧಿಯಾಗತೊಡಗಿದವು. ಲಂಡನ್ ಪ್ರಾಣಿಸಂಗ್ರಹಾಲಯದ ಸ್ಥಾಪಕನಾದ ಸರ್ ಸ್ಟಾಫರ್ಡ್ ರ್ಯಾಫಲ್ಸ್ ಸುಮಾತ್ರದಲ್ಲಿ ಜಾಕಾಯಿ ಮರಗಳನ್ನು ಬೆಳೆಸುವುದನ್ನು ಪ್ರೋತ್ಸಾಹಿಸಿದ. 1824ರ ಸಮಯಕ್ಕೆ ಟ್ರಿನಿಡಾಡಿಗೂ 1843ರ ವೇಳೆಗೆ ಗ್ರನೇಡಕ್ಕೂ ಇದನ್ನು ತಂದು ಬೆಳೆಸಲಾಯಿತು. ಸುಮಾರು ಇದೇ ಕಾಲಕ್ಕೆ eóÁಂಜಿûಬಾರಿನಲ್ಲೂ ಇದನ್ನು ಬೆಳೆಸಲಾರಂಭಿಸಿದರು.

ಸಸ್ಯ ವೃತ್ತಾಂತ : ಇದು ಅಗಲವಾಗಿ ಹರಡಿಕೊಂಡು ಬೆಳೆಯುವ ಸದಾ ಹಸಿರಿನ ಮರ. 5-15 ಮೀ. ಎತ್ತರಕ್ಕೆ ಬೆಳೆಯುತ್ತದೆ. ಕೆಲವು ಸಲ 20 ಮೀ.ಗೂ ಹೆಚ್ಚು ಎತ್ತರ ಬೆಳೆಯುವುದುಂಟು. ತೊಗಟೆ ಬೂದುಮಿಶ್ರಿತ ಕಪ್ಪು ಬಣ್ಣದ್ದು; ವಯಸ್ಸಾದ ತೊಗಟೆ ಉದ್ದುದ್ದವಾಗಿ ಸೀಳಿರುವುದುಂಟು. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಆಕಾರ ಅಂಡದಂತೆ; ಬಣ್ಣ ಕಡುಹಸಿರು; ಅಂಚು ನಯವಾಗಿದೆ. ವೃತ್ತಪರ್ಣಗಳಿಲ್ಲ. ಎಲೆಗಳನ್ನು ಉಜ್ಜಿದರೆ ಒಂದು ತೆರನ ಸುವಾಸನೆ ಸೂಸುವುದುಂಟು. ಹೂಗಳು ಏಕಲಿಂಗಿಗಳು; ವಿಭಿನ್ನ ಮರಗಳಲ್ಲಿ ಅರಳುತ್ತವೆ. ಅಪರೂಪಕ್ಕೆ ಒಂದೇ ಮರದಲ್ಲಿ ಗಂಡು ಮತ್ತು ಹೆಣ್ಣುಹೂಗಳೂ ದ್ವಿಲಿಂಗಿ ಹೂಗಳೂ ಇರುವುದುಂಟು. ಗಂಡು ಹೆಣ್ಣು ಹೂಗೊಂಚಲುಗಳೆರಡೂ ಛತ್ರಿಯಾಕಾರದ ಸೈಮೋಸ್ ಮಾದರಿಯವು. ಹೂಗಳಿಗೆ ಮಧುರವಾದ ಗಂಧವೂ ತಿಳಿಹಳದಿ ಬಣ್ಣವೂ ಇವೆ. ಹೂಗಳಲ್ಲಿ ದಳಗಳೇ ಇಲ್ಲ. ಗಂಡುಹೂವಿನಲ್ಲಿ ಗಂಟೆಯಾಕಾರದ ಪುಷ್ಪಪತ್ರ ಸಮೂಹ ಮತ್ತು 8-12 ಕೇಸರಗಳು ಇವೆ. ಕೇಸರಗಳೆಲ್ಲ ಹೂವಿನ ಕೇಂದ್ರಭಾಗದಲ್ಲಿ ಒಟ್ಟಾಗಿ ಕೂಡಿ ಒಂದು ಕಂಬದಂಥ ರಚನೆಯನ್ನು ನಿರ್ಮಿಸಿವೆ. ಹೆಣ್ಣುಹೂವಿನಲ್ಲಿ ಪುಷ್ಪಪತ್ರದ ಜೊತೆಗೆ ಒಂದೇ ಒಂದು ಕಾರ್ಪೆಲಿನಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಉಂಟು. ಅಂಡಾಶಯದೊಳಗೆ ಒಂದೇ ಒಂದು ಅಂಡಕ ಇದೆ. ಫಲ ರಸಭರಿತ ಅಷ್ಟಿಮಾದರಿಯದು. ಇದರ ಬಣ್ಣ ಹಳದಿ. 

ಕಾಯಿ ಬಲಿತಾಗ ಎರಡು ಹೋಳುಗಳಾಗಿ ಸೀಳುತ್ತದೆ. ಒಳಗೆ ಒಂದೇ ಒಂದು ಬೀಜ ಉಂಟು. ಬೀಜದ ಸುತ್ತ ಕೆಂಪು ಬಣ್ಣದ ಮತ್ತು ಕಚ್ಚುಕಚ್ಚಾದ ಅಂಚುಗಳುಳ್ಳ ಏರಿಲ್ ಎಂಬ ಹೊದಿಕೆ ಇದೆ. ಇದೇ ಜಾಪತ್ರೆ.

ಬೇಸಾಯ : ಜಾಕಾಯಿ ಬೇಸಾಯಕ್ಕೆ ನೀರು ಸುಲಭವಾಗಿ ಬಸಿದು ಹೋಗುವಂಥ ಮತ್ತು ಪುಡಿಪುಡಿಯಾಗುವ ಗುಣವುಳ್ಳ ಗೋಡು ಮಣ್ಣು, ಮತ್ತು ವರ್ಷಕ್ಕೆ 150-300 ಸೆಂ.ಮೀ. ಮಳೆ ಹಾಗೂ 76ಲಿ-92ಲಿ  ಫ್ಯಾ. ಉಷ್ಣತೆ ಇರುವ ಹವಾಮಾನ ಅತ್ಯುತ್ತಮ. ಸಮುದ್ರಮಟ್ಟದಿಂದ ಹಿಡಿದು 750 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚು. 

ಜಾಕಾಯಿಯನ್ನು ಬೀಜಗಳಿಂದ, ಕಾಂಡತುಂಡುಗಳಿಂದ, ಕಸಿಮಾಡುವುದರಿಂದ ಹಾಗೂ ಗೂಟ ಕಟ್ಟುವುದರಿಂದ ವೃದ್ದಿ ಮಾಡಬಹುದು. ಚೆನ್ನಾಗಿ ಬಲಿತಿರುವ ಹಣ್ಣುಗಳನ್ನು ಆಯ್ದುಕೊಂಡು ಬೀಜಗಳನ್ನು ತೆಗೆದು ಒಂದು ದಿನ ಒಣಗಿಸಲಾಗುತ್ತದೆ. ಬಳಿಕ ನೇರವಾಗಿ ಜಾಕಾಯಿ ಮರಗಳನ್ನು ಬೆಳೆಸುವ ಭೂಮಿಯಲ್ಲಾಗಲಿ ಮಡಿಗಳಲ್ಲಾಗಲಿ ಬೀಜಗಳನ್ನು ನೆಟ್ಟು ಬಿಸಿಲಿನಿಂದ ರಕ್ಷಿಸಬೇಕು. ನೆರಳಿನಲ್ಲಿ 98% ರಷ್ಟು, ಬಿಸಿಲು ಹೆಚ್ಚಾಗಿರುವ ಕಡೆ 92%ರಷ್ಟು ಬೀಜ ಮೊಳೆಯುತ್ತವೆ. ಆದರೆ ಬಿಸಿಲಿನಲ್ಲಿ ಒಣಗಿಸಿ 2 ತಿಂಗಳು ಶೇಖರಿಸಿಟ್ಟ ಬೀಜಗಳ ಮೊಳೆಯುವ ಸಾಮಥ್ರ್ಯ ನೆರಳಿನಲ್ಲಿ 7% ರಷ್ಟು ಮಾತ್ರ. ಇಂಥವು ನೆರಳಿಲ್ಲದ ಕಡೆ ಮೊಳೆಯುವುದೇ ಇಲ್ಲ. ಬೀಜಗಳನ್ನು ಮಡಿಯಲ್ಲಿ 15 ಸೆಂ.ಮೀ. ಅಂತರಕ್ಕೊಂದರಂತೆ 0.5 ಸೆಂ.ಮೀ. ಆಳಕ್ಕೆ ನೆಡಲಾಗುತ್ತದೆ. ಬೀಜಗಳು 1 1/2 - 3 ತಿಂಗಳ ಅನಂತರ ಮೊಳೆಯುತ್ತವೆ. ಸಸಿಗಳು 1 ಮೀ. ಎತ್ತರಕ್ಕೆ ಬೆಳೆದ ಬಳಿಕ ಅವನ್ನು ಬೇಕಾದ ಜಾಗದಲ್ಲಿ ತಂಪು ಹವೆ ಇರುವಾಗ ನಾಟಿ ಮಾಡುವುದುಂಟು. ತಮಿಳುನಾಡಿನ ನೀಲಗಿರಿಯಲ್ಲಿ 6 ತಿಂಗಳು ವಯಸ್ಸಾಗಿರುವ ಸಸಿಗಳನ್ನು ಕುಂಡಗಳಲ್ಲಿ ನಾಟಿ ಮಾಡಿ, ಒಂದು ವರ್ಷದ ಆನಂತರ ಬೇಕಾದ ಸ್ಥಳಗಳಿಗೆ ವರ್ಗಾಯಿಸಲಾಗುತ್ತದೆ.

ಜಾಕಾಯಿ ಸಸಿಗಳನ್ನು ನೆಡುವುದಕ್ಕೆ ಆರಿಸಿದ ಭೂಮಿಯಲ್ಲಿ 1 ಘನಮೀಟರ್ ಆಳದ ಗುಂಡಿಗಳನ್ನು 6-8 ಮೀ. ಅಂತರ ಬಿಟ್ಟು ತೆಗೆಯಲಾಗುತ್ತದೆ. ಗುಂಡಿಯನ್ನು ಒಂದೆರಡು ವಾರ ಆರಲು ಬಿಟ್ಟು ಆನಂತರ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನೊಡನೆ ಬೆರೆಸಿ ಗುಂಡಿಗೆ ತುಂಬಲಾಗುತ್ತದೆ. ತರುವಾಯ ಬೀಜಗಳನ್ನೊ ಸಸಿಗಳನ್ನೊ ಗುಂಡಿಯ ಮಧ್ಯದಲ್ಲಿ ನೆಡಲಾಗುತ್ತದೆ. ಚಿಕ್ಕ ಸಸಿಗಳಿಗೆ ನೆರಳು ಅಗತ್ಯವಾದ್ದರಿಂದ ಮುಂಚಿತವಾಗಿಯೇ ಬಾಳೆ, ಗ್ಲಿರಿಸಿಡಿಯ ಮುಂತಾದವನ್ನು ಬೆಳೆಸುವುದಿದೆ. ಜಾಕಾಯಿಯನ್ನು ಕಾಫಿ, ಚಹಾ, ಅಡಿಕೆ, ತೆಂಗು ಮತ್ತು ಹಣ್ಣಿನ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಸುವ ಕ್ರಮ ಉಂಟು. ಮೊದಲ ವರ್ಷ ಒಂದು ಗಿಡಕ್ಕೆ 25 ಗ್ರಾಂ. ಕೊಟ್ಟಿಗೆ ಗೊಬ್ಬರ, 30 ಗ್ರಾಂ. ಅಮೋನಿಯಮ್ ಸಲ್ಪೇಟ್, 30 ಗ್ರಾಂ. ಸೂಪರ್ ಫಾಸ್ಪೇಟ್ ಮತ್ತು 30 ಗ್ರಾಂ. ಮ್ಯೂರಿಯೇಟ್ ಆಫ್ ಪೊಟ್ಯಾಷನ್ನು ಹಾಕಲಾಗುತ್ತದೆ. ಪ್ರತಿ ವರ್ಷ ಈ ಪ್ರಮಾಣವನ್ನು ಹೆಚ್ಚಿಸುತ್ತ ಹೋಗುವುದುಂಟು.

ಸಾಮಾನ್ಯವಾಗಿ ಜಾಕಾಯಿ ಮರಗಳು ಭಿನ್ನಲಿಂಗದವು ಎಂದು ಮೇಲೆಯೇ ಹೇಳಿದೆ. ಬಹಳ ವರ್ಷಗಳ ಅನಂತರ ಅಪರೂಪಕ್ಕೆ ಗಂಡುಮರಗಳು ಹೆಣ್ಣು ಮರಗಳಾಗಿ ಪರಿವರ್ತನೆಗೊಳ್ಳುವುದುಂಟು. ಬೀಜಗಳಿಂದ ವೃದ್ದಿಸಿದ ಜಾಕಾಯಿ ತೋಟಗಳಲ್ಲಿ ಹೆಣ್ಣುಮರಗಳಿಗಿಂತ ಗಂಡುಮರಗಳೇ ಹೆಚ್ಚಾಗಿರುತ್ತವೆ. ಯಾವುದು ಗಂಡು ಯಾವುದು ಹೆಣ್ಣು ಎಂಬುದು ಸಸಿಗಳನ್ನು ನೆಟ್ಟ 6-7 ವರ್ಷಗಳ ಮೇಲೆ ಅಂದರೆ ಅವು ಹೂವು ಬಿಡಲಾರಂಭಿಸಿದಾಗ ಗೊತ್ತಾಗುತ್ತದೆ. ತೋಟದಲ್ಲಿ ಹೆಣ್ಣುಮರಗಳನ್ನು ಸಾಕಷ್ಷು ಸಂಖ್ಯೆಯಲ್ಲಿ ಪಡೆಯಲು ಒಂದು ಗುಂಡಿಯಲ್ಲಿ ಎರಡೆರಡು ಸಸಿಗಳನ್ನು ನೆಡುವ ಕ್ರಮ ಇದೆ. ಹೆಣ್ಣುಮರ ಯಾವುದು ಎಂದು ತಿಳಿದಮೇಲೆ ಗಂಡುಮರಗಳನ್ನು ತೆಗೆದುಹಾಕಲಾಗುತ್ತದೆ. ಕೆಲವು ಸಲ ಗಂಡುಮರಗಳು ಹೆಚ್ಚಾಗಿದ್ದರೆ ಅವನ್ನು ಕತ್ತರಿಸಿ ಹೆಣ್ಣುಮರದ ರೆಂಬೆಗಳನ್ನು ತಂದು ಕಸಿ ಮಾಡುವುದುಂಟು. ಮೇಲೆ ಹೇಳಿದ ತೊಂದರೆಯನ್ನು ತಪ್ಪ್ಪಿಸುವ ಸಲುವಾಗಿಯೂ ಅಧಿಕ ಇಳುವರಿ ಕೊಡುವ ಮತ್ತು ರೋಗ ನಿರೋಧಸಾಮಥ್ರ್ಯವನ್ನು ಹೊಂದಿರುವ ಗಿಡಗಳನ್ನು ಪಡೆಯಲೂ ಜಾಕಾಯಿಯನ್ನು ಕಾಂಡತುಂಡುಗಳಿಂದ ಸುಲಭವಾಗಿ ವೃದ್ದಿ ಮಾಡಬಹುದು. ಜಾಕಾಯಿಗೆ ಡಿಪ್ಲೋಡಿಯ ನೇಟಾಲೆನ್ಸಿಸ್ ಬೂಷ್ಟಿನಿಂದ ಉಂಟಾಗುವ ಕೊಳೆ ರೋಗವನ್ನು ಬಿಟ್ಟರೆ ಇತರ ರೋಗಗಳಿಲ್ಲ. ಕೀಟ ಪಿಡುಗುಗಳೂ ಕಡಿಮೆಯೇ, ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ಕೊಳೆ ರೋಗವನ್ನು ತಡೆಗಟ್ಟಬಹುದು.

ಕೊಯ್ಲು ಮತ್ತು ಇಳುವರಿ: ಸುಧಾರಿಸಿದ ರೀತಿಯಲ್ಲಿ ಬೇಸಾಯ ಮಾಡಿ ಜಾಕಾಯಿಯನ್ನು ಬೆಳೆಸಿದರೆ ನೆಟ್ಟ ಏಳನೆಯ ವರ್ಷದ ಅನಂತರ ಅಥವಾ ಮುಂಚಿತವಾಗಿ ಫಲ ಬಿಡಲು ಪ್ರಾರಂಭಿಸುವುದು. ಫಸಲು 15 ವರ್ಷದವರೆಗೂ ಹೆಚ್ಚುತ್ತಹೋಗುತ್ತದೆ. 

ಚಿತ್ರ
ಬೀಜದೊಳಗಿನ ತಿರುಳು

70-80 ವರ್ಷಗಳವರೆಗೂ ಲಾಭದಾಯಕ ಇಳುವರಿಯನ್ನು ಕೊಡುವುದು. ಜಾಕಾಯಿ ಮರ ವರ್ಷಪೂರ್ತಿ ಹಣ್ಣುಗಳನ್ನು ಬಿಡುವುದಾದರೂ ಮುಖ್ಯವಾದ ಕೊಯ್ಲಿನ ಕಾಲ ಜೂನ್-ಅಕ್ಟೋಬರ್. ಇಂಡೊನೇಷ್ಯದಲ್ಲಿ ವರ್ಷಕ್ಕೆ ಎರಡು ಮೂರು ಬಾರಿ ಇದರ ಕೊಯ್ಲು ಮಾಡುವುದುಂಟು. ಚೆನ್ನಾಗಿ ಬಲಿತು ಮೇಲಿನ ಸಿಪ್ಪೆ ಸೀಳಿರುವಂಥ ನೆಲಕ್ಕೆ ಬಿದ್ದ ಹಣ್ಣುಗಳನ್ನು ಆಯ್ದುಕೊಳ್ಳಲಾಗುತ್ತದೆ. ಕೆಲವು ಸಲ ತುದಿಯಲ್ಲಿ ಕೊಕ್ಕೆಯನ್ನು ಕಟ್ಟಿರುವ ಉದ್ದ ಕೋಲಿನ ಸಹಾಯದಿಂದ ಹಣ್ಣುಗಳನ್ನು ಕೊಯ್ಯುವುದುಂಟು. ಭಾರತದಲ್ಲಿ ವರ್ಷಕ್ಕೆ ಒಂದು ಮರದಿಂದ ಸರಾಸರಿ 1000-1500 ಹಣ್ಣುಗಳನ್ನು ಪಡೆಯಬಹುದು. ಇತರ ದೇಶಗಳಲ್ಲಿ ಒಂದು ಮರದಿಂದ ವರ್ಷಕ್ಕೆ 20,000 ಹಣ್ಣುಗಳನ್ನು ಇಳಿಸಿದ ದಾಖಲೆಗಳೂ ಉಂಟು.

ಜಾಕಾಯಿ ಮತ್ತು ಜಾಪತ್ರೆಯನ್ನು ಸಂಸ್ಕರಿಸುವ ವಿಧಾನ : ಹಣ್ಣುಗಳನ್ನು ಸಂಗ್ರಹಿಸಿ ಹಣ್ಣಿನ ಮೇಲಿರುವ ಸಿಪ್ಪೆಯನ್ನೆಲ್ಲ ತೆಗೆದು, ಬೀಜವನ್ನು ಜಾಪತ್ರೆಯಿಂದ ಬೇರ್ಪಡಿಸಿ ಒಣಗಿಸಬೇಕು. ಇದನ್ನು ಅಲ್ಲಾಡಿಸಿದಾಗ ಬೀಜದ ತಿರುಳು ಶಬ್ದ ಮಾಡಿದರೆ ಬೀಜ ಪೂರ್ತಿ ಒಣಗಿದೆ ಎಂದಾಗುತ್ತದೆ. ಅನಂತರ ಬೀಜದ ಸಿಪ್ಪೆಯನ್ನು ಕೊಡತಿಯಿಂದ ಇಲ್ಲವೆ ಬೇರೆ ಸೂಕ್ತವಾದ ಉಪಕರಣಗಳಿಂದ ಸೀಳಿ ಒಣಗಿದ ತಿರುಳನ್ನು ತೆಗೆದು ಶೇಖರಿಸಲಾಗುತ್ತದೆ. ಇಂಡೋನೇಷ್ಯದಲ್ಲಿ ಒಣಗಿಸುವುದಕ್ಕೆ ಮುಂಚೆ ಕಾಯಿಗೆ ಸುಣ್ಣವನ್ನು ಹಚ್ಚುವ ಕ್ರಮ ಉಂಟು. ಇದರಿಂದ ಬೀಜಕ್ಕೆ ಕೀಟಗಳ ಹಾವಳಿ ಇರುವುದಿಲ್ಲ ಮತ್ತು ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಜಾಪತ್ರೆಯನ್ನು ಕೂಡ ಜಾಕಾಯಿಯಿಂದ ಬೇರ್ಪಡಿಸಿ ಎರಡು ಹಲಗೆಗಳ ಮಧ್ಯೆ ಇಟ್ಟು ಚಪ್ಪಡೆ ಮಾಡಿ ಅನಂತರ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಉತ್ತಮ ಗುಣದ ಜಾಪತ್ರೆಯನ್ನು ಪಡೆಯಲು ಅದಕ್ಕಾಗಿಯೇ ನಿರ್ಮಿಸಿದ ಒಲೆಯಲ್ಲಿ ಒಣಗಿಸುವುದುಂಟು. ಕೆಲವು ದೇಶಗಳಲ್ಲಿ ಒಣಗುವ ಜಾಪತ್ರೆಯ ಮೇಲೆ ಉಪ್ಪು ನೀರನ್ನು ಸಿಂಪಡಿಸುವುದಿದೆ. ಇದರಿಂದ ಜಾಪತ್ರೆಯನ್ನು ಬಹಳ ಕಾಲ ಕೆಡದಂತೆ ಇಡಬಹುದು. ಒಣಗಿಸುವಾಗ ಜಾಪತ್ರೆ ಮೊದಲು ಕಗ್ಗೆಂಪು ಬಣ್ಣಕ್ಕೆ ತಿರುಗಿ ಬಿದುರವಾಗುತ್ತದೆ. 6 ವಾರಗಳ ಅನಂತರ ಇದಕ್ಕೆ ಒಳ್ಳೆಯ ಅಂಬರ್ ಬಣ್ಣ ಬರುತ್ತದೆ.

ಒಳ್ಳೆಯ ಜಾಕಾಯಿ 2-3.5 ಸೆಂ.ಮೀ. ಉದ್ದವೂ 1.5-2.8 ಸೆಂ.ಮೀ. ಅಗಲವೂ ಇದ್ದು ಅಂಡಾಕಾರದ್ದಾಗಿದೆ. ಇದರ ಬಣ್ಣ ಬೂದುಮಿಶ್ರಿತ ಕಂದು. ಅಲ್ಲಲ್ಲೆ ಸೂಕ್ಷ್ಮವಾದ ಕೆಂಗಂದು ಬಣ್ಣದ ಮಚ್ಚೆಗಳೂ ಗೆರೆಗಳೂ ಉಂಟು. ಅಲ್ಲದೆ ಬಲೆಯಾಕಾರದ ಜಾಡುಗಳೂ ಇವೆ. ಇದಕ್ಕೆ ತೀವ್ರವಾದ ಸುವಾಸನೆಯೂ ಕಟು ರುಚಿಯೂ ಉಂಟು. ಸಾಮಾನ್ಯವಾಗಿ ಜಾಕಾಯಿಯಲ್ಲಿ ಈಸ್ಟ್ ಇಂಡಿಯನ್ ಮತ್ತು ವೆಸ್ಟ್ ಇಂಡಿಯನ್ ಎಂಬ ಎರಡು ಮುಖ್ಯ ಬಗೆಗಳುಂಟು. ಇವುಗಳಲ್ಲಿ ಮೊದಲನೆಯದು ಉತ್ತಮ ದರ್ಜೆಯದೆಂದು ಹೆಸರಾಗಿದೆ. ಇದರಲ್ಲೂ ಬಾಂಡ, ಸಿಯಾವ್ ಮತ್ತು ಪೆನಾಂಗ್ ಜಾಕಾಯಿಗಳೆಂಬ ವರ್ಗಗಳಿವೆ. ಇವುಗಳೆಲ್ಲೆಲ್ಲ ಅತ್ಯುತ್ತಮವಾದ್ದು ಬಾಂಡ ಜಾಕಾಯಿ. ಇವಲ್ಲದೆ ಮಿರಿಸ್ಟಿಕ ಆರ್ಜೆಂಶಿಯ ಪ್ರಭೇದದಿಂದ ಪಡೆಯಲಾಗುವ ಪಾಪುವ ಜಾಕಾಯಿ ಮತ್ತು ಮಿ.ಮಲಬಾರಿಕ ಪ್ರಭೇದದಿಂದ ಪಡೆಯಲಾಗುವ ಬಾಂಬೆ ಜಾಕಾಯಿ ಎಂಬ ಬಗೆಗಳೂ ಉಂಟು. ಇವನ್ನು ಜಾಕಾಯಿಯೊಂದಿಗೆ ಕಲಬೆರಕೆ ಮಾಡುವುದಿದೆ.

 	 ರಾಸಾಯನಿಕ ಸಂಯೋಜನೆ : ಜಾಕಾಯಿಯಲ್ಲಿ 14.3% ತೇವಾಂಶ, 7.5% ಪ್ರೋಟೀನ್, 28.5% ಕಾರ್ಬೋಹೈಡ್ರೇಟುಗಳು, 36.4% ಈಥರಿನಲ್ಲಿ ವಿಲೀನವಾಗಿ ಬೇರ್ಪಡುವಂಥ ವಸ್ತು, 11.6% ನಾರು, 1.7% ಖನಿಜಾಂಶ, 0.12% ಕ್ಯಾಲ್ಸಿಯಮ್, 0.24% ರಂಜಕ ಮತ್ತು ಪ್ರತಿ 100 ಗ್ರಾಂ. ನಲ್ಲಿ 4.6 ಗ್ರಾಂ. ಕಬ್ಬಿಣ ಇವೆ. ಜೊತೆಗೆ 6.16% ಚಂಚಲ ತೈಲ, 14.6% - 24.2% ಪಿಷ್ಟ ಹಾಗೂ ಪೆಂಟೊಸಾನುಗಳು, ಫರ್‍ಫರಾಲ್, ಪೆಕ್ಟಿನುಗಳೂ ಉಂಟು. ಜಾಕಾಯಿಯ ವಿಶಿಷ್ಟ ವಾಸನೆಗೆ ಇದರಲ್ಲಿನ ಚಂಚಲ ತೈಲವೇ ಕಾರಣ. ಇದನ್ನು ಆವಿ ಆಸವೀಕರಣದಿಂದ ಬೇರ್ಪಡಿಸಿ ಆಹಾರ ಪದಾರ್ಥಗಳು, ಪಾನೀಯಗಳು, ಸಾಬೂನು, ತಂಬಾಕು ಮುಂತಾದವಕ್ಕೆ ವಾಸನೆ ಕಟ್ಟಲು ಬಳಸುತ್ತಾರೆ. ಇದಕ್ಕೆ ಔಷಧೀಯ ಗುಣಗಳೂ ಉಂಟು. ಉಜ್ಜುತೈಲ (ಲಿನಿಮೆಂಟ್) ಹಾಗೂ ಕೇಶತೈಲಗಳ ತಯಾರಿಕೆಯಲ್ಲೂ ಮೂತ್ರಕೋಶದ ಉರಿಯೂತದ ನಿವಾರಣೆಗೂ ಜಾಕಾಯಿ ತೈಲವನ್ನು ಉಪಯೋಗಿಸುವುದಿದೆ. ಇದರಲ್ಲಿ ಮಿರಿಸ್ಟಿಸಿನ್ ಎಂಬ ವಿಷವಸ್ತು ಇರುವುದರಿಂದ ತೈಲವನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ಜಾಕಾಯಿಯಲ್ಲಿ ಒಂದು ತೆರನ ಕೊಬ್ಬೂ ಉಂಟು. ಜಾಕಾಯಿಯನ್ನು ಅರೆದು, ಬೇಯಿಸಿ, ಅನಂತರ ಗಾಣಕ್ಕೆ ಒಡ್ಡಿ ಈ ಕೊಬ್ಬನ್ನು ಹೊರತೆಗೆಯಲಾಗುತ್ತದೆ. ಇದರ ಬಣ್ಣ ಹಳದಿ, ವಾಸನೆ ಜಾಕಾಯಿಯಂತೆಯೇ. ಇದನ್ನು ಸಂಧಿವಾತ, ಪಾಶ್ರ್ವವಾಯು, ಉಳುಕು ಮುಂತಾದವುಗಳಲ್ಲಿ ಉಪಯೋಗಿಸಲಾಗುತ್ತದೆ.

ಜಾಪತ್ರೆಯಲ್ಲಿ ಬಾಂಡ, ಜಾವ ಎಸ್ಟೇಟ್ ಮತ್ತು ಸಿಯಾವ್ ಎಂಬ ಮೂರು ಬಗೆಗಳಿವೆ. ಇವುಗಳಲ್ಲಿ ಮೊದಲನೆಯದಕ್ಕೆ ಕಿತ್ತಳೆ ಬಣ್ಣವೂ ಸೊಗಸಾದ ಸುವಾಸನೆಯೂ ಉಂಟು. ಇದು ಜಾಪತ್ರೆಗಳಲ್ಲೆಲ್ಲ ಅತ್ಯುತ್ತಮವಾದುದು. ಜಾವ ಎಸ್ಟೇಟ್ ಜಾಪತ್ರೆಗೆ ಕೆಂಪು ಬಣ್ಣದ ಮಚ್ಚೆಗಳುಳ್ಳ ಹೊಂಬಣ್ಣ ಇದೆ. ಗುಣಮಟ್ಟದಲ್ಲಿ ಇದು ಎರಡನೆಯ ದರ್ಜೆಯದು. ಸಿಯಾವ್ ಜಾಪತ್ರೆಯ ಬಣ್ಣ ತಿಳಿಕಿತ್ತಳೆ. ಇದರಲ್ಲಿ ಚಂಚಲ ತೈಲ ಅಲ್ಪಮೊತ್ತದಲ್ಲಿರುವುದರಿಂದ ವಾಸನೆ ಅಷ್ಟಾಗಿ ಇಲ್ಲ. ಜಾಕಾಯಿಯ ಇತರ ಬಗೆಗಳಂತಯೇ ಜಾಪತ್ರೆಯಲ್ಲೂ ಪಾಪುವ, ವೆಸ್ಟ್ ಇಂಡಿಯನ್ ಮತ್ತು ಬಾಂಬೆ ಜಾಪತ್ರೆಗಳೆಂಬ ಕೀಳು ದರ್ಜೆಯ ಬಗೆಗಳೂ ಉಂಟು.

	ಉಪಯೋಗ : ಜಾಕಾಯಿ ಜಾಪತ್ರೆಗಳೆರಡೂ ಸಂಬಾರ ವಸ್ತುಗಳಾಗಿ, ಔಷಧಿಗಳಾಗಿ ಬಳಕೆಯಲ್ಲಿವೆ. ವಿವಿಧ ರೀತಿಯ ಆಹಾರಗಳಿಗೆ ವಾಸನೆ ಕಟ್ಟಲು ಇವನ್ನು ಉಪಯೋಗಿಸುವುದಲ್ಲದೆ, ತಾಂಬೂಲದೊಂದಿಗೆ ಸೇರಿಸಿ ಅಗಿಯುವುದು ಉಂಟು. ಜಾಕಾಯಿ ಉತ್ತೇಜಕ, ಜೀರ್ಣಕಾರಿ, ಬಂಧಕ ಮತ್ತು ಕಾಮೋತ್ತೇಜಕವೆಂದು ಹೆಸರು ಪಡೆದಿದೆ. ಹೊಟ್ಟೆನೋವು, ಆಮಶಂಕೆ, ಜಠರದಲ್ಲಿ ವಾಯು ಸೇರುವಿಕೆ, ವಾಂತಿ, ಪಿತ್ತೋದ್ರೇಕ, ಮಲೇರಿಯ ಮುಂತಾದ ಬೇನೆಗಳ ನಿವಾರಣೆಗೆ ಇದನ್ನು ಬಳಸುವುದಿದೆ. ಕೆಲವೆಡೆ ಜಾಕಾಯಿಯ ಹೊರಸಿಪ್ಪೆಯನ್ನು ಉಪ್ಪಿನಕಾಯಿಗಳಲ್ಲಿ ಉಪಯೋಗಿಸುವುದುಂಟು.
(ಎಂ.ಎಚ್.ಎಂ.)

(ಪರಿಷ್ಕರಣೆ : ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ